ಪಟೇಲ್, ಜಾಸು
1924-. ಭಾರತದ ಸುಪ್ರಸಿದ್ಧ ಕ್ರಿಕೆಟ್ ಆಟಗಾರ. ಏಳು ವರ್ಷದವರಿದ್ದಾಗಲೇ ಕ್ರಿಕೆಟ್ ಬ್ಯಾಟ್ ಹಿಡಿದು ಆಡುವ ಒಲವನ್ನು ತೋರಿದರು. ಆದರೆ ಹತ್ತನೆಯ ವರ್ಷದಲ್ಲಿ ಗಿಡದಿಂದ ಬಿದ್ದುದರಿಂದ ಮುಂಗೈಗೆ ಪೆಟ್ಟು ತಗುಲಿತು. ಪರಿಣಾಮವಾಗಿ ಅವರು ಹೈಸ್ಕೂಲಿನಲ್ಲಿದ್ದಾಗ ಒಂದು ದಿನವೂ ಕ್ರಿಕೆಟ್ ಆಡಿರಲಿಲ್ಲ. ಕಾಲೇಜಿನಲ್ಲಿ ಮಾತ್ರ ಬ್ಯಾಟ್ಸ್ಮನ್ ಎಂದು ಆಡತೊಡಗಿ ಬಲು ಬೇಗ ಟೀಮಿನ ನೇತಾರರಾದರು. ಬರೊಡ ಕಾಲೇಜು ಟೀಮಿನ ವಿರುದ್ಧ ಆಡಿದಾಗ ಕೆಲವೇ ರನ್ನುಗಳನ್ನಿತ್ತು ಎದುರಾಳಿಗಳ 9 ವಿಕೆಟ್ ಕೆಡವಿದರು. ಹೀಗೆ ಅವರ ಬೌಲಿಂಗಿನ ಯೋಗ್ಯತೆಯ ಅರಿವಾಯಿತು. ಕೂಡಲೇ ಅವರನ್ನು ರಣಜಿ ಟ್ರೋಫಿ ಪಂದ್ಯಕ್ಕೆಂದು ಟೀಮಿನಲ್ಲಿ ಸೇರಿಸಿಕೊಳ್ಳಲಾಯಿತು (1943). ಮುಂದಿನ ಏಳು ವರ್ಷಗಳ ಅವಧಿಯಲ್ಲಿ ಅಖಿಲಭಾರತ ಮಟ್ಟದ ಅಟಗಳಲ್ಲಿ ಆಡಿ ಅವರು 950 ವಿಕಟ್ ಕೆಡವಿದುದು ದೊಡ್ಡಸಾಧನೆಯಾಗಿದೆ. ಅವರನ್ನು 1950ನೆಯ ವರ್ಷದ ಕ್ರಿಕೆಟ್‍ಪಟು ಎಂದು ಗೌರವಿಸಲಾಯಿತು.

	ಅವರು ಟೆಸ್ಟ್ ಪಂದ್ಯದಲ್ಲಿ ಆಡಿದುದು ವೆಸ್ಟ್ ಇಂಡೀಸ್ ಟೀಮಿನ ವಿರುದ್ಧ. ಮುಂದಿನ ಹತ್ತು-ಹನ್ನೆರಡು ವರ್ಷಗಳಲ್ಲಿ ಆಸ್ಟ್ರೇಲಿಯ, ನ್ಯೂ ಜೀಲೆಂಡ್, ಇಂಗ್ಲೆಂಡ್ ಮತ್ತು ಪಾಕಿಸ್ಥಾನ ಟೀಮುಗಳ ವಿರುದ್ಧದ ಆಟಗಳಲ್ಲಿ ಸಾಕಷ್ಟು ಹೆಸರು ಗಳಿಸಿದರು. ಅವರ ಆಟದ ಉತ್ತಮಿಕೆಗೆ, ಕಾನ್‍ಪುರದಲ್ಲಿ ನವೆಂಬರ್ 1959ರಲ್ಲಿ ಭಾರತ-ಆಸ್ಟ್ರೇಲಿಯ ನಡುವೆ ನಡೆದ ಎರಡನೆಯ ಟೆಸ್ಟನ್ನು ನೆನೆಯಬೇಕು. ಆಗ ಅವರು ಕೇವಲ 69 ರನ್ನುಗಳನ್ನು ಕೊಟ್ಟು 9 ವಿಕೆಟ್‍ಗಳನ್ನು ಕೆಡವಿ ವಿಕ್ರಮವನ್ನೆ ಸ್ಥಾಪಿಸಿದರು. ಮರುವರ್ಷ ಭಾರತ ಸರ್ಕಾರ ಪದ್ಮಶ್ರೀ ಪದವಿಯನ್ನಿತ್ತು ಅವರನ್ನು ಗೌರವಿಸಿತು. 					    (ಎಸ್.ಕೆ.ಎಚ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ